ಕಾಕರ್, ಎಮಿಲ್ ತಿಯೊಡೋರ್

1841-1917. ಸ್ವಿಟ್ಜರ್ಲೆಂಡಿನ ಶಸ್ತ್ರ ವೈದ್ಯ. ಬರ್ನ್ ವಿಶ್ವವಿದ್ಯಾಲಯದಲ್ಲಿ ಪದವೀಧರನಾಗಿ (1865) ಬರ್ಲಿನ್, ಲಂಡನ್, ಪ್ಯಾರಿಸ್, ವಿಯನ್ನಾಗಳಲ್ಲಿ ಅಭ್ಯಸಿಸಿದ. ವಿಯನ್ನಾದಲ್ಲಿ ಜಠರ ಶಸ್ತ್ರಕ್ರಿಯೆಗೆ ಹೆಸರಾಗಿದ್ದ ಬಿಲ್‍ರಾತನ ವಿದ್ಯಾರ್ಥಿಯಾಗಿದ್ದ. ಬರ್ನ್‍ನಲ್ಲಿ ರೋಗಿಬದಿಯ (ಕ್ಲಿನಿಕಲ್) ಶಸ್ತ್ರವೈದ್ಯದ ಪ್ರಾಧ್ಯಾಪಕನಾಗಿ (1872) 45 ವರ್ಷಗಳ ಕಾಲ ಇಲಾಖೆಯ ಮುಖ್ಯನಾಗಿದ್ದ. ಆಗಿನ ಕಾಲದಲ್ಲಿ (1881) ಸ್ವಿಟ್ಜರ್ಲೆಂಡಿನಲ್ಲಿ ಲಿಸ್ಟರ್ ತತ್ತ್ವಗಳನ್ನು ಇವನು ಮೊಟ್ಟಮೊದಲು ಜಾರಿಗೆ ತಂದ. ಆದರೂ ಈತನ ಮನೋಧರ್ಮ ಹೊಸ ವಿಧಾನಗಳನ್ನು ಸುಲಭವಾಗಿ ಒಪ್ಪಿಕೊಳ್ಳುವಂತಿತ್ತು. ಕೊನೆಗೆ ಪೂರ್ತಿ ನಂಜಿಲ್ಲದ (ಎಸೆಪ್ಟಿಕ್) ವಿಧಾನವನ್ನು ಒಪ್ಪಿಕೊಂಡ. ಪ್ರಯೋಗದ, ಅಂಗಕ್ರಿಯೆಯ ಸೂತ್ರಗಳನ್ನು ಶಸ್ತ್ರವೈದ್ಯಕ್ಕೆ ಚೆನ್ನಾಗಿ ಅಳವಡಿಸುವುದರಲ್ಲಿ ಕಾಕರ್ ಮುಂದಾಳಾಗಿದ್ದ. ಅವನಿಗೆ ಹೆಸರು ತಂದ ಗುರಾಣಿಕ (ತೈರಾಯ್ಡ್) ಗ್ರಂಥಿಯ ಕೆಲಸ, ರೋಗ, ಶಸ್ತ್ರವೈದ್ಯ ಮುಖ್ಯವಾಗಿ ಗಳಗಂಡದ (ಗಾಯ್ಟರ್) ವಿಚಾರಗಳ ಪ್ರಬಂಧಗಳಿಗಾಗಿ ನೊಬೆಲ್ ಬಹುಮಾನ (1909) ದೊರೆಯಿತು. ಸುಮಾರು 9,000ಕ್ಕೂ ಮೀರಿದ ಗಳಗಂಡದ ಶಸ್ತ್ರಕ್ರಿಯೆಗಳನ್ನು ನಡೆಸಿ ಬಲು ಅಪಾಯಕರ, ಕಷ್ಟಕರ ಆದದ್ದನ್ನು ತೀರ ಸರಳ ಎನಿಸುವಂತೆ ತೋರಿಸಿಕೊಟ್ಟ. ಈ ಶಸ್ತ್ರಕ್ರಿಯೆಯಾದ ಇವನ ರೋಗಿಗಳ ಸಾವಿನ ಸಂಖ್ಯೆ ಶೇ.1ಕ್ಕೂ ಕಡಿಮೆ ಇತ್ತು. ಹೆಗಲಿನ ಕೀಲ್ತಪ್ಪಿಕೆಯನ್ನು ಸರಿಪಡಿಸುವ ವಿಧಾನವನ್ನು ಜಠರ, ಪುಪ್ಪುಸ, ಪಿತ್ತಕೋಶ, ನಾಲಗೆ, ಕಪಾಲನರಗಳು, ಬೂರುಗಳ ಶಸ್ತ್ರಕ್ರಿಯಾವಿಧಾನಗಳಲ್ಲಿ  ಬದಲಾವಣೆಗಳನ್ನೋ ಹೊಸ ವಿಧಾನಗಳನ್ನೋ ಜಾರಿಗೆ ತಂದ. ಕರುಳನ್ನು ಕತ್ತರಿಸಿ ತೆಗೆದು ಉಳಿದ ಕೊನೆಗಳನ್ನು ಮತ್ತೆ ಹೊಲಿದು ಸರಿಪಡಿಸಿದವರಲ್ಲಿ ಇವನೇ ಮೊದಲಿಗ. ಅಲ್ಲದೆ, ಹಲವಾರು ಉಪಾಯಗಳು, ಸಲಕರಣೆಗಳು, ಉಪಕರಣಗಳನ್ನು ಕಂಡುಹಿಡಿದ. ಈಗಲೂ ಅವನ ಹೆಸರಿನ ಚಿಮಟವೂ ಹಲಬಗೆಯ ಇರಿತಗಳೂ (ಇನ್‍ಸಿಷನ್ಸ್) ಎಲ್ಲೆಲ್ಲೂ ಬಳಕೆಯಲ್ಲಿವೆ. ಕಾಕರ್ ಯೂರೋಪಿನ ಅನೇಕ ಪ್ರಸಿದ್ಧ ಶಸ್ತ್ರವೈದ್ಯರ ಗುರುವಾಗಿದ್ದ. ಅವನ ಶಸ್ತ್ರವೈದ್ಯದ ಪಠ್ಯಪುಸ್ತಕ (1892) ಹಲವು ಭಾಷೆಗಳಿಗೂ ಬಂದು ಕೆಲವು ಆವೃತ್ತಿಗಳನ್ನೂ ಕಂಡಿದೆ. 

 (ಡಿ.ಎಸ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ